ಮಳೆಯೇ ನೀ ಜಿನುಗಿರಲು, ಹಸಿರು ನೆಲದಿ ಹರಡಿರಲು, ಮೈ ಕೊರೆವ ಚಳಿಯಲ್ಲಿ, ನೀ ನನ್ನ ಸನಿಹದಲಿ...
ಹೂವೊಂದ ಕೊಡಲೇ.. ? ಹೂ ಮುತ್ತೊಂದ ಕೊಡಲೇ.. ?
---------------------------------------*****----------------------------------------
ತಂಗಾಳಿ ನೀ ಬೀಸುತಿರು ಶೀತದ ಭಯವಿಲ್ಲ.. ಸೂರ್ಯ ನೀ ಬೆಳಗುತಿರು ನಿನ್ನ ಪ್ರಖರತೆಗೆ ಸಮವಿಲ್ಲ.. ಇದು ವಿದ್ಯುತ್ ಉಳಿಸುವ ಉಪಾಯವಲ್ಲ.. ಆಗ ಆಕೆ ಬರಬಹುದಲ್ಲ ;
---------------------------------------*****----------------------------------------
ತರ್ಕಕ್ಕೆ ನಿಲುಕದ ಲೋಕದಲ್ಲಿ.. ನಿದಿರೆ ಬಾರದ ರಾತ್ರಿಯಲ್ಲಿ.. ಬೇಡದ ನೆನಪುಗಳು ಬಾಡಿ ಹೋಗುವ ಮುನ್ನ.. (ಏನಿಲ್ಲ ನಿದ್ದೆ ಬರ್ತಿದೆ)
---------------------------------------*****----------------------------------------
ನೀ ಇದ್ದರೆ ರಸ.. ನೀ ಇಲ್ಲವೆ೦ದರೆ ನೀರಸ... ನೀ ಇದ್ದರೆ ರಸ.. ನೀ ಇಲ್ಲವೆ೦ದರೆ ನೀರಸ... ವಿಪರ್ಯಾಸ ನೋಡಿ, ನೀ ರಸದ ಜೊತೆಯಿದ್ದಾಗಲೇ ನೀರಸ!!
---------------------------------------*****----------------------------------------
ಗೀಚುವ ಗೀಳು ಶುರುವಾಗಿದೆ... ತೇಲುವ ತವಕ ತರವಲ್ಲವೇ...? ಅಮಲಿಗೋ... ಹಗುರಕೋ.. ಅನುಭವ ಬೇಕಲ್ಲವೇ..?
---------------------------------------*****----------------------------------------
ಬರೆಯುವೆನೆಂದರೆ ಹೊಳೆಯುವುದಿಲ್ಲ :( ಹೊಳೆದಿದ್ದೆಲ್ಲ ಬರೆಯಲಾಗುವುದಿಲ್ಲ :) ಬರೆದಿದ್ದು ಓದಿದರಷ್ಟೆ ಏನು ಪ್ರಯೋಜನ? ಮೆಲುಕು ಹಾಕಿದಾಗಲ್ಲವೇ ಹಗುರ ಮನ. . .
---------------------------------------*****----------------------------------------
ಪ್ರತಿಸಲವೂ ಅನುಭವಕ್ಕೆ ಬರೋದು >> ಕಲ್ಪನೆಯೇ ಒಂದು, ವಾಸ್ತವವೇ ಒಂದು.. ಪ್ರತಿಸಲವೂ ನಿರೀಕ್ಷಿಸುವುದು >> ಕಲ್ಪನೆ ವಾಸ್ತವವಾಗಲೆಂದು.. ಕಲ್ಪನೆಯನ್ನೇ ತಕ್ಕಂತೆ ಬದಲಿಸಿದರೆ ಫಲ ಸಿಕ್ಕೀತೆಂದು.. ಅನಿಸುತಿದೆ ಯಾಕೋ ಇಂದು... (ಖಂಡಿತ ಹೇಳುವೆ.. ಇದು ಕಲ್ಪನಾ-ವಾಸ್ತವ್ ಅವರ ಪ್ರೇಮಕಾವ್ಯ ಅಲ್ಲವೆಂದು!)
---------------------------------------*****----------------------------------------
ನೆನೆದಾಗ.. ಇಂದಿಗೂ ಅದೇ ರೋಮಾಂಚನ... ತಾಜಾತನ... :) ಮಂಜು ಮುಸುಕಿನಲ್ಲಿ ಮಿಂದಂತೆ ತನು ಮನ..!
---------------------------------------*****----------------------------------------
ಸೋಜಿಗದ ಸಂಗತಿ..
ಗಾಳಿಯಿಂದ ಗೋಳೇಕೆ ಆರಬಾರದು.. ಬೆಂಕಿಯಿಂದ ಬೇಸರವೇಕೆ ಬೇಯಬಾರದು.. ನೀರಿಂದ ನೋವೇಕೆ ನೀಗಬಾರದು..
ಅಹುದು ಅಹುದು ಲೋಕವಿರುವುದೇ ಹೀಗೆ..
ರಸಗಳು ಒಂಬತ್ತೇ ಏಕೆ... ಅದನು ಹಂಚುವ ಗೋಜೇಕೆ..
ಎಲ್ಲೆಡೆ ನೆಮ್ಮದಿಯಿದ್ದರೆ ಯಾರಿಗೆ ನಷ್ಟ.. ಸೃಷ್ಟಿಯ ಈ ಕೃತ್ಯ ಹಾಸ್ಯಾಸ್ಪದ.. ನಮ್ಮ ದುರದೃಷ್ಟ..!!
---------------------------------------*****----------------------------------------
ಹೊಸದಾಗಿ ಎಲೆಗಳು ಚಿಗುರಿಹುದು.. ಸೊಗಸಾಗಿ ಅದರ ಮೇಲೆ ಮಳೆ ಹನಿ...
ಹಣ್ಣಾದ ಎಲೆಗಳು ಉದುರುತಿಹುದು.. ಅದರ ನೆನಪುಗಳಿಂದ ಮಿಡಿದಿದೆ ಕಂಬನಿ...
ಕಂಡು ಕಾಣದಂತೆ ನಿಂತರೂ ಸ್ನೇಹದ ಮರ.. ಇಂಪುಣಿಸುತಿದೆ ಹಾಡಿ ತನ್ನ ಮಾರ್ದನಿ...
---------------------------------------*****----------------------------------------
ಕಣ್ಣು ಬಿಡದಷ್ಟು ಪ್ರಭೆಯುಳ್ಳ ಕಿರಣಗಳವು... ಮರದ ಎಲೆಗಳ ಮಧ್ಯೆ ಇಣುಕಿ ಸೂರ್ಯನ ಕುಚೋದ್ಯ,,,
ಸುಮ್ಮನಿರಲು ಬಿಡದ ಆಲಾಪಗಳವು.. ಮರೆಯದ ಅಲೆಗಳ ಹರೆಯದ ದಿನಗಳ ನೆನಪಿಸುವ ಪದ್ಯ ,, :-)
---------------------------------------*****----------------------------------------
ಸಮಯ ನೋಡಿದೆ..
ಕಿವಿಗಳಿಗೆ ಹಕ್ಕಿಗಳ ಕಲರವವಿಲ್ಲ.. ಬದಲಾಗಿ ಗಡಿಯಾರದ ಮುಳ್ಳು ತಿವಿಯುತ್ತಲಿತ್ತು..
ಸಮಯ ನೋಡಿದೆ..
ಬೆಳಗಿನ ತಾಜಾತನವಿಲ್ಲ... ಕಚೇರಿಯ ನೀರಸ ಬಾಗಿಲಿತ್ತು....
ಸಮಯ ನೋಡಿದೆ..
ಆಡುವ ಸ್ಥಳವಲ್ಲ.. ರುಚಿಯಿಲ್ಲದ ಭೋಜನ ಕಾಯುತ್ತಿತ್ತು..
ಸಮಯ ನೋಡಿದೆ..
ನಿದ್ದೆ ಬರಲೂ ಇಲ್ಲ ಹೋಗಲೂ ಇಲ್ಲ.. ಚಹಾ ಕುಡಿಯುವ ಹೊತ್ತು..
ಸಮಯ ನೋಡಿದೆ..
ಬೀಳ್ಕೊಡಲು ಮುಸ್ಸಂಜೆಯ ಕಿರಣಗಳಿಲ್ಲ.. ಘಂಟೆ ಆರೂ ಮುವತ್ತು..
ಸಮಯ ನೋಡಿದೆ..
ದಿನ ಉರುಳಿತಲ್ಲ.. ಉಂಡು ಮಲಗಾಗಿತ್ತು..
ಸಮಯ ನೋಡಲಿಲ್ಲ...
ನೆನಪುಗಳು ಸುಮ್ಮನಿರಬೇಕಲ್ಲ.. ಋತು ಋತುಗಳ ಹಿಂದೆ ಕರೆದೊಯ್ದಿತ್ತು..
ಸಮಯ ನೋಡಲಿಲ್ಲ....
ಕನಸಿಗೆ ತೆರಿಗೆಯಿಲ್ಲ... ಬಹುಷಃ ಇದೇ ನಮ್ಮ ನಿಜವಾದ ಸ್ವತ್ತು....
---------------------------------------*****----------------------------------------
ಹಳೆಯ ರಾಗವಾದರೂ ನೀ ಹೊಸ ತಾಳದಲ್ಲಿ ಬೇರೆಯೇ.. ಕಾಲ ತಂದ ಈ ಬದಲಾವಣೆ ತಪ್ಪೇ ಸರಿಯೇ..?! ಅಚ್ಚರಿಯಲೊಂದು ಅಚ್ಚರಿ... ಮರೆತೆಯಾ ಹಳೆಯ ಗಾನಲಹರಿ....
ನನಗೆ ಸಂಪೂರ್ಣವಾಗಿ ನೆನಪಿಲ್ಲದಿದ್ದರೂ.. ಕುರುಹುಗಳು ಕೆರದಲ್ಲಿ ಹೊಡೆಯುತ್ತಿವೆ ;
---------------------------------------*****----------------------------------------
ನವ ನವಂಬರ್ ಒಂದು!! ಮತ್ತೊಂದು ವರ್ಷಾಚರಣೆ ರಾಜ್ಯೋತ್ಸವಕ್ಕಿಂದು..
ಇಸವಿ ಎರಡು ಸಾವಿರದ ಹನ್ನೊಂದು.. ಇರಲಿ ಕನ್ನಡ ಸಾವಿರದ ಹಾಗೆ ಎಂದೆಂದು.. :)
ಸಮಸ್ತರಿಗೂ ಶುಭಾಶಯಗಳು..
---------------------------------------*****----------------------------------------
ಇಲ್ಲ.. ಈ ಬಾರಿ ಇದು ನನ್ನ ತಪ್ಪಲ್ಲ....( ಇದನ್ನು ಬರೆಯುತ್ತಿರುವುದಕ್ಕಾಗಿ! )
ಸುಮ್ಮನಿದ್ದ ನನ್ನನ್ನು ಕೆಣಕಿದ ಆ ಹೂವಿನದ್ದೇ...
ಕೇಳಿದೆ ನಾನು.... " ನಗುತ್ತಿರುವೆಯೇಕೆ.. ಯಾರಾದರೂ ಕಚಗುಳಿ ಇಟ್ಟರೇ ?"
ಹೇಳಿತು ಹೂವು.. " ನಾವಿರುವುದೆ ಹೀಗೆ.. ಕಪಟವಾಡಲು ನಾವೇನು ಮಾನವರೇ ?" :)
---------------------------------------*****----------------------------------------
ಇಂದು ನನಗೇನೋ ತಿಳಿಯದು.. ಹಗುರಾ ಮನಸು ಹಗುರಾ ..
ನೆನ್ನೆ ನಾಳೆಗೆ ಹೋಲಿಕೆ.. ಬೇಡ ಇದು ಸುಂದರ ..
ಹಿಡಿತಕೆ ಬಾರದೆ .. ತೇಲಿ ಹೋದೆ ..
ಮಂಜು ಮೈ ಸೋಕಿ ..
ಪುಳಕವಾದಂತೆ..
ಭಾಸವಾಗಿದೆ..
---------------------------------------*****----------------------------------------
ತಡ ರಾತ್ರಿಯಲಿ ಜನ್ಮ ತಳೆಯಿತು..
ಮುಂಜಾನೆ ಮನದ ಮಾತಾಯಿತು..
ಸಾಯಂಕಾಲ ಸಾಕಾಯಿತು..
ಮತ್ತೆ ರಾತ್ರಿಯಾಯಿತು...
(ಹಹಹ...
ಗಮನಿಸಿ ಅದು ಕೇವಲ ಜಾಹೀರಾತು.. ! )
"ತಡ ರಾತ್ರಿಯಲಿ ಜನ್ಮ ತಳೆಯಿತು..
ಮುಂಜಾನೆ ಮನದ ಮಾತಾಯಿತು..
ಸದ್ದಿಲ್ಲದೇ ಸುಳಿವೊಂದು ಸಿಕ್ಕಿತ್ತು...
ಮದ್ದಿಲ್ಲದೇ ಮತ್ತೇರುವ ನಂಜಾಗಿತ್ತು.. "
---------------------------------------*****----------------------------------------